Sunday, August 31, 2008

ವಲಸೆ ರಾಜ ಚಿಟ್ಟೆ- ಜಗತ್ತಿನ ವರ್ಣ ವೈಭವ




ಬಣ್ಣ ಬಣ್ಣದ ಚಿಟ್ಟೆಗಳು ಕಂಡಾಗ ಒಂದು ಕ್ಷಣ ನಿಂತು ಅವುಗಳನ್ನು ನೋಡದೆ ಮುಂದೆ ಹೋಗಲು ಸಾಧ್ಯವೇ? ಬಣ್ಣವೇ ಅವುಗಳ ಮೋಹಕ ಗುಣ, ಬಣ್ಣ ಬಣ್ಣದ ಹೂಗಳ ಮೇಲೆ ಕೂರುತ್ತಾ, ಹಾರುತ್ತಾ ಮಕ್ಕಳಿಂದ ಮುದಕರವರೆಗೆ ಬಣ್ಣದ ಕನಸುಗಳನ್ನು ಹಂಚುತ್ತಾ ಹೋಗುವ ಚಿಟ್ಟೆಗಳಿಗೆ ಮರುಳಾಗದವರೇ ಇಲ್ಲ. ಸಸ್ಯಗಳ ಪ್ರೇಮಕಥೆಯಲ್ಲಿ ಚಿಟ್ಟೆಗಳದ್ದು ಪೋಸ್ಟ್ ಮನ್ ಪಾತ್ರ. ಮಕರಂದವನ್ನು ಹೀರಲು ಹೂಗಳಿಂದ ಹೂಗಳಿಗೆ ಭೇಟಿ ನೀಡುವ ಚಿಟ್ಟೆಗಳು ಸಸ್ಯಗಳ ಪರಾಗಸ್ಪರ್ಶ ಕ್ರಿಯೆಯಲ್ಲಿ ಮಧ್ಯವರ್ತಿಗಳಾಗಿ ಭಾಗವಹಿಸುತ್ತದೆ. ಮಕರಂದವಲ್ಲದೆ, ಕೊಳೆಯುವ ಹಣ್ಣು, ಪ್ರಾಣಿಗಳ ಮಲ, ಮೂತ್ರ, ಮಣ್ಣಿಗೂ ಸಹ ತಮ್ಮ ಬಾಯಿಯಲ್ಲಿನ ಹೀರು ಕೊಳವೆಯನ್ನು ತೂರಿಸಿ ಅಗತ್ಯ ಪೋಷಕಾಂಶ ಪಡೆಯುತ್ತದೆ. ಆದರೆ, ಕೆಲವು ಪ್ರಭೇದದ ಚಿಟ್ಟೆಗಳಿಗೆ ಮಕರಂದ ಬೇಕೇಬೇಕು. ಮಕರಂದವಿಲ್ಲದೆ ಅವು ಸಂತಾನೋತ್ಪತ್ತಿ (ಮೊಟ್ಟೆ ಉತ್ಪಾದನೆ) ಮಾಡಲಾರವು.
ಸಾಮಾನ್ಯವಾಗಿ ಚಿಟ್ಟೆಗಳ ಲಾರ್ವಾಗಳು (ಮರಿ ಹುಳುಗಳು) ನಿರ್ದಿಷ್ಟ ಪ್ರಭೇದದ ಅಥವಾ ಸಂಬಂಧಿತ ಪ್ರಭೇದದ ಸಸ್ಯಗಳ ಎಲೆಗಳನ್ನು ಆಹಾರವಾಗಿ ಬಳಸುತ್ತವೆ. ಆದ್ದರಿಂದಲೇ ಕೆಲವು ಪ್ರಭೇದದ ಚಿಟ್ಟೆಗಳು ನಿರ್ದಿಷ್ಟ ಆವಾಸಸ್ಥಾನಕ್ಕೆ ಸೀಮಿತಗೊಂಡಿವೆ. ಚಿಟ್ಟೆಗಳ ೧೫ ತಲೆಮಾರುಗಳು ವರ್ಷವೊಂದರಲ್ಲಿ ಹುಟ್ಟಿ ಬದುಕಿ ಸಾಯುತ್ತವೆ. ಚಿಟ್ಟೆಗಳಲ್ಲಿ ಸುಮಾರು ೧೮,೦೦೦ ಪ್ರಭೇದಗಳಿವೆ ಎಂದು ಆಂದಾಜು ಮಾಡಲಾಗಿದೆ.
ಕೆಲವು ಪ್ರಭೇದದ ಹಾತೆಗಳೂ ಚಿಟ್ಟೆಗಳಂತೆಯೇ ಕಾಣುತ್ತವೆ. ಆದರೆ ಸಾಮಾನ್ಯವಾಗಿ ಹಾತೆಗಳು ರಾತ್ರಿ ವೇಳೆ ಹಾರಾಡುತ್ತವೆ. ವೆಲ್ವೆಟ್ನನಂತಹ ದಪ್ಪನೆಯ ರೆಕ್ಕೆಗಳನ್ನು ಹೊಂದಿರುತ್ತವೆ. ರೆಕ್ಕೆಗಳನ್ನು ವಿಶಾಲವಾಗಿ ಹರಡಿಕೊಂಡು ವಿಶ್ರಮಿಸುತ್ತದೆ. ರಾತ್ರಿಯಲ್ಲಿ ಬೆಳಕಿನ ಮೂಲದಿಂದ ಆರ್ಕರ್ಷಿತವಾಗುತ್ತವೆ. ಗಿಡ, ಹೂವು ನೆಲದ ಹಿನ್ನೆಲೆಯಲ್ಲಿ ಲೀನವಾಗಿ ಶತ್ರುಗಳಿಂದ ತಮ್ಮನ್ನು ಮರೆಮಾಚಿಕೊಳ್ಳಲು ಚಿಟ್ಟೆಗಳು ಬಣ್ಣ ಬಣ್ಣದ ರೆಕ್ಕೆಗಳನ್ನು ಹೊಂದಿವೆ. ಕೆಲವಂತೂ ರೆಕ್ಕೆಗಳ ಮೇಲೆ ದೊಡ್ಡ ಕಣ್ಣಿನಂತಹ ವಿನ್ಯಾಸ ಮಾಡಿಕೊಂಡು ಶತ್ರುಗಳನ್ನು ಹೆದರಿಸುತ್ತವೆ. ಸಾವಿರಾರು ಪ್ರಭೇದಗಳ ಚಿಟ್ಟೆಗಳನ್ನು ನೋಡಿದರೆ ಇವು ಕೀಟ ಲೋಕದ ಅದ್ಭುತ ಸೃಷ್ಟಿ ಎನ್ನುವ ಮಾತು ಉತ್ಪ್ರೇಕ್ಷೆ ಅಲ್ಲ.
ಆಧಾರ

No comments:

Post a Comment