Saturday, August 29, 2009

ಅಕ್ಕನ ನೆನಪು


ಎಲ್ಲಿ ಹೋದೆಯೆ ವಾಸಂತಿ ಹೆಸರಿನ ಸೌಂದರ್ಯವತಿ? ನೀನಿಲ್ಲದ ಒಂದು ವರ್ಷ ನಿನ್ನನ್ನು ಎಷ್ಟು ಮಿಸ್ ಮಾಡಿದ್ದೀವಿ ಗೊತ್ತಾ. ಪೂರ್ಣಿಮ, ಅನಂತು, ಆಶಾ ಮದುವೆಯಾಗಿದ್ದಾರೆ. ಆದಿತ್ಯಾ ಶಾಲೆಗೆ ಹೋಗ್ತಾ ಇದ್ದಾನೆ. ನಿನ್ನ ಅಚ್ಚು ಮೆಚ್ಚಿನ ದಿಯಾ ಬಹಳ ಬುದ್ದಿವಂತೆ ಆಗಿದ್ದಾಳೆ. ನಿನ್ನ ಅಣ್ಣಂದಿರು ಬೇರೆಯಾಗಿದ್ದಾರೆ. ನೀನು ಯಾವಗಲೂ sports star ಅಂತ ಹೇಳ್ತಿದ್ದ ನನಗೆ ಅಪಘಾತವಾಗಿ ನೋವನ್ನು ಅನುಭವಿಸುತ್ತಿದ್ದೇನೆ. ವಿಚಿತ್ರ ನೋಡು ನೀನು ಮೈಸೂರಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವಾಗಲೆ ನನಗೂ ಅಪಘಾತವಾಗಿ ಅಸ್ಪತ್ರೆ ಸೇರಿದೆ. ಆ ಸಮಯದಲ್ಲಿ ನೀನು ನನ್ನ ಜೋತೆ ಇರಬೇಕಿತ್ತು.ನಾನು ಹೇಗೊ ಚೇತರಿಸಿಕೊಂಡು ಮನೆಗೆ ಬಂದೆ, ಆದರೆ ನೀನು ಹಿಂದಿರುಗಲೇ ಇಲ್ಲ. ಶವವಾಗಿ ಮನೆಗೆ ಮರಳಿದೆ. ನೀನು ಬೆಂಗಳೂರಿನಿಂದ ಮೈಸೂರಿಗೆ ಸಾವನ್ನು ಅಪ್ಪಿಕೊಳ್ಳಲು ಏಕೆ ಹೋದೆ ಅಕ್ಕ.

ಏನಂಥಾ ಅವಸರ ಇತ್ತೆ ತಾಯಿ ನಿನಗೆ. ದ್ವಿಚಕ್ರ ವಾಹನ ಏರಿ ಹೊರಟವಳು ದಿಢೀರನೆ ಕುಸಿದು ಬಿದ್ದೆ. ಇಂದಿನ ದಿನದವರೆಗೂ ಕೂಡ ನಿನ್ನ ಸಾವಿನ ನಿಗೂಢತೆ ನಮಗ್ಯಾರಿಗೂ ಅರ್ಥವಾಗಿಲ್ಲ. ಆದರೆ ನಮ್ಮಗಳ ಎದೆಯಲ್ಲಿ ಎಂಥಾ ಆಘಾತವಾಗಿದೆ ಎಂಬ ಆರಿವು ನಿನಗಿದೆಯಾ? ನಿನಗೆ ಅಪಘಾತವಾಯಿತು ಎಂಬ ಸುದ್ದಿ ಕೇಳಿ ನಾನು ಚಿಕ್ಕ ಪುಟ್ಟ ಗಾಯಗಳಾಗಿರ ಬಹುದು ಅಂತ ಭಾವಿಸಿದ್ದೆ ನಿನ್ನನ್ನು ಅಂತ ಪರಿಯಲ್ಲಿ ಐ ಸಿ ಯುನಲ್ಲಿ ನೋಡುತ್ತೀನಿ ಅಂತ ಕನಸಿನಲ್ಲೂ ಎಣಿಸಿರಲಿಲ್ಲ.

ವೈದ್ಯೆಯಾಗಿ ಎಷ್ಟೊ ಜನರ ಪ್ರಾಣ ಉಳಿಸಿದ ನೀನು, ನಿನ್ನ ಪ್ರಾಣ ಪಕ್ಷಿ ಹಾರಿ ಹೋಗುವುದನ್ನು ಯಾರಿಂದಲೂ ತಡೆಯಲು ಆಗಲೆ ಇಲ್ಲ. ಬದುಕು ನಿನಗೇನು ಕಡಿಮೆ ಮಾಡಿತ್ತು. ಚಿಕ್ಕ ವಯಸ್ಸಿಗೆ ಮನ್ನಣೆ ಕೊಟ್ಟಿತ್ತು. ಒಂದಲ್ಲ, ಎರಡಲ್ಲ ಆನೇಕ ಅಸ್ಪತ್ರೆಗಳಲ್ಲಿ ನಿನ್ನಂಥ ವೈದ್ಯೆಯ ಅಗತ್ಯವಿತ್ತು. ನಿನ್ನ ಸೇವೆ ಜನರಿಗೆ ಬೇಕಾಗಿತ್ತು. ನಿನ್ನ ಮನಸ್ಸಿನಲ್ಲಿ ಆದೇನು ನೋವಿತ್ತೊ, ಆದೇನು ಕೊರತೆ ಇತ್ತೋ, ಒಂದು ತೋರ ಗೊಡದೇ ಹೂವಿನಂತೆ ನಗುತ್ತಲೇ ಹೋದೆ. ಯಾರಿಗೂ ನೀನು ನೋವುಂಟು ಮಾಡಲಿಲ್ಲ. ಎಲ್ಲರ ಮನಸ್ಸಿನಲ್ಲೂ ಅರಳಿ ಹೂವಾದೆ.

ಏಪ್ರಿಲ್ ೪ ನಿನ್ನ ಹುಟ್ಟು ಹಬ್ಬ. ೧೪ ನಮಗೆ ಆನೇಕ ಸೌಲಭ್ಯಗಳನ್ನು ಒದಗಿಸಿ ಕೊಟ್ಟ, ನಮ್ಮ ಪಾಲಿನ ತಂದೆ ಅಂಬೇಡ್ಕರ್‍ ರವರ ಹುಟ್ಟುಹಬ್ಬ. ಈ ದಿನ ಶ್ರೀರಾಮನವಮಿ ಕೂಡ ಆಗಿತ್ತು. ದಿನವೆಲ್ಲ ಸಂಭ್ರಮ ಪಡುವುದಕ್ಕಾಗಿ ತಯಾರಿ ನಡೆಸಿದ್ದ ನಾವು. ಮಂಡ್ಯದಲ್ಲಿ ಯಾವುದೊ ಹೆರಿಗೆ ಕೇಸ್ ಇತ್ತು ಅಂತ ಹೊರಟ ನೀನು ಹಿಂದಿರುಗಿ ಬರಲೆ ಇಲ್ಲ. ಆಗ ತಾನೇ ಸೂರ್ಯ ತನ್ನ ಕಾವು ಹೆಚ್ಚಿಸ ತೊಡಗಿದ್ದ ಆಗ ನಿನಗೆ ಅಪಘಾತವಾದ ಸುದ್ದಿ ಬಿಸಿಲಿನ ಭೇಗೆಯಲ್ಲೂ ಸಿಡಿಲು ಅಪ್ಪಳಿಸಿದಂತಾಯಿತು.

ನಂತರ ಹರಿದಿದ್ದೆಲ್ಲ ಕಣಿರೇ. ನಾವೆಲ್ಲಾ ಇದ್ದ ಜಾಗದಿಂದಲೇ ಹನಿಯಾದೆವು, ಮರುಗಿದೆವು, ನಲುಗಿ ಹೋದೆವು. ಕಳೆದ ಒಂದು ವರ್ಷಗಳಿಂದ ನಿನ್ನ ನೆನಪಾದಾಗೆಲ್ಲ ಹೀಗೆ ಹನಿಯಾಗಿದ್ದೇವೆ. ಪ್ರತಿಯೊಂದು ಹನಿಯು ನಿನ್ನ ಚಿತ್ರವನ್ನು ನಮ್ಮ ಹೃದಯದಲ್ಲಿ ದಟ್ಟವಾಗಿಸಿದೆ. ಈ ಬಾರಿ ಮೈಸೂರು ದಸರಾದ ರಂಗು ನೀನಿಲ್ಲದೆ ಕಡಿಮೆಯಾಗಿದೆ. ಅಸಲಿಗೆ ನೀನಿಲ್ಲದೆ ದಸರಾಗೆ ಹೋಗೊ ಮನಸ್ಸು ನನಗಿಲ್ಲ. ಇಡೀ ಊರೆಲ್ಲಾ ಸುತ್ತಾಡುತ್ತಿದ್ದ ನಾವು, ಬೈಕಿನಲ್ಲಿ ಟ್ರಿಪಲ್ಲ್ ರೈಡು, ಎನ್. ಆರ್‍ ಮೋಹಲ್ಲಾ ಗೋಬಿ, ಎಫ್. ಟಿ. ಎಸ್. ಪಾನೀ ಪುರಿ, ಚರ್ಚು, ಬೆಟ್ಟನ ನಡಿಗೆ ಮೂಲಕವ ಹತ್ತಿದ್ದೂ, ನೀನು ನನಗೆ ಮಾಡಿಸುತ್ತಿದ್ದ ಶಾಪಿಂಗ್, ನಾನ್ ವೆಜ್ ವಿರುದ್ದ ನೀನು ಮಾಡುತ್ತಿದ್ದ ಗಂಟೆಗಟ್ಟಲೆ ಭಾಷಣ ಇವೆಲ್ಲಾ ನನ್ನನ್ನ ಹೀಗಲೂ ಕಾಡದೆ ಬಿಡೊದಿಲ್ಲ.

ನಾವು ಇನ್ನೇನು ತಾನೆ ಮಾಡಲು ಸಾಧ್ಯ ಅಕ್ಕ. ನನ್ನ ಬದುಕಿನಲ್ಲಿ ದುಃಖ ಬಂದಾಗ, ನಗು ಉಕ್ಕಿದಾಗ, ಕನಸುಗಳು ಮೂಡಿದಾಗ, ಯಾರಾದ್ರು ಸ್ತ್ರೀ ರೋಗ ತಜ್ಞರನ್ನು ನೋಡಿದಾಗಲೆಲ್ಲಾ ನಿನ್ನ ನೆನಪಾಗಿದೆ. ನಿನ್ನ ಅನುಪಸ್ಥತಿ ಕಾಡಿದೆ. ಪ್ರತಿಯೊಂದು ನಗುವಿನ ಹಿಂದಿರುವ ವಿಷಾದದಂತೆ ನೀನು ನನ್ನೆದೆಯಲ್ಲಿ ಶಾಶ್ವತ ವಿಷಾದವಾಗಿ ಉಳಿದು ಬಿಟ್ಟಿರುವೆ. ನಾನು ಇನ್ನೇನು ತಾನೆ ಹೇಳಲು ಸಾಧ್ಯ. ಎಷ್ಟೊ ಜನರಿಗೆ ಮಾದರಿಯಾಗಿ ಬದುಕಿದವಳು ನೀನು, ಬದುಕಿದ್ದ ೨೮ ವರ್ಷಗಳು ಸಹ ಸಾರ್ಥಕ ಬದುಕು ಸಾಗಿಸಿದವಳು ನೀನು. ಮರಳಿ ಬಾರದ ಲೋಕಕ್ಕೆ ನೀನು ಹೋಗಿರುವೆ. ನೆನಪುಗಳ ಗುಛ್ಚವನ್ನು ಬಿಟ್ಟು.

2 comments:

  1. ಶ್ರವ್ಯಾ, ಅಕ್ಕನ ಅಕಾಲಿಕ ಅಗಲಿಕೆಯ ಮನಕಲಕುವ ಕಕ್ಕುಲತೆ ತುಂಬಿದ ಮನದಾಳದ ಮಾತುಗಳು....ಏನು ಹೇಳಲಿ? ಅದು ಅನುಭವಿಸಿದವರಿಗೇ ಗೊತ್ತು. ಆಕ್ಕನ ಆತ್ಮಕ್ಕೆ ಶಾಂತಿಯನ್ನು ಕೋರಬಹುದು, ತಂಗಿ, ತಮ್ಮ, ಅಣ್ಣ, ಪ್ರೀತಿಯ ತoದೆ-ತಾಯಿಯರಿಗೆ ಸಾಂತ್ವನ ಹೇಳಬಹುದಷ್ಟೆ.

    ReplyDelete
  2. ಹೇ ಶ್ರಾವ್ಯ ಯಾಕೋ ಇವತ್ತು ಈ ಕಡೆ ಬಂದೆ. ನಿಮ್ಮ ಮಾತು ಸಿಕ್ತು. ಬರಹ ಕಣ್ಣು ಹನಿಗೂಡಿಸಿತು.
    ಬರವಣಿಗೆ ಮುಂದುವರೆಯಲಿ.

    ReplyDelete